" ನಾಳೆ ನಮ್ಮದು "
------------------
ಹಳೆಯ ದಿನಗಳು ಕಳೆದು ಹೋದವು
ಕಷ್ಟ-ಸುಖದಾ ಜೊತೆಯಲಿ ||
ನೆನಪನೊಂದಿಷ್ಟ್ ಉಳಿಸಿ ಹೋದವು
’ಭಾವ ಭಿತ್ತಿ’ಯ ಪುಟದಲಿ || ೧ ||
ಹೊಸತು ದಿನಗಳು ಶುಭವ ತರುವವು
ಎನ್ನುವಾಸೆಯು ಮನದಲಿ ||
ಇನ್ನು ಬರುವವು ಸುಖದ ದಿನಗಳು
ಎಂಬ ಆಶಯ ಫಲಿಸಲಿ || ೨ ||
ಕಷ್ಟ-ಸುಖಗಳು ಒಂದನೊಂದನು
ಬಿಟ್ಟು ಇರಲೂ ಸಾಧ್ಯವೆ ? ||
ಒಂದೆ ನಾಣ್ಯದ ಮುಖಗಳಂತೆ
ಒಟ್ಟಿಗಿರುವವು ಅಲ್ಲವೆ ? || ೩ ||
ಕಷ್ಟವಿದ್ದರೆ ಸುಖದ ಘಳಿಗೆಗೆ
ಬೆಲೆಯು ನಮ್ಮಯ ಬಾಳಲಿ ||
’ನಾಳೆ ನಮ್ಮದು’ ಎಂಬ ಆಸೆಯು
ಬತ್ತದಿರಲೀ ಬದುಕಲಿ || ೪ ||
- ಸುರೇಖಾ ಭೀಮಗುಳಿ
31/12/2015
ಚಿತ್ರ : ಸುಮಂತ ಬೀಮಗುಳಿ
ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli
ಹುಟ್ಟಿಷ್ಟು ವರ್ಷದಲಿ ಸಾಧಿಸಿದೆನೇನನ್ನು ?
ಹೇಗೆ ಹೇಳಲಿ ನಾನು ನಿಮ್ಮ ಮುಂದೆ ? ||
ಸಾಧನೆಯೆ ಮುಖ್ಯವೇ ? ಆತ್ಮತೃಪ್ತಿಯ ಮುಂದೆ
ಪ್ರಶ್ನೆಗುತ್ತರವನ್ನು ಹುಡುಕಿ ಬಂದೆ || ೧ ||
ಸಾಧನೆಯ ಅಳೆಯುವರು ಹೊರಗಿರುವ ಮಂದಿಗಳು
ಆತ್ಮ ತೃಪ್ತಿಯ ಭಾವ ನನ್ನದೇನೆ ||
ಸಾಧನೆಯ ಗುರಿಯಿರಲಿ ಬೇಡವೆಂದವರಾರು ?
ಅದುವೆ ಜೀವನ ಗಮ್ಯವಲ್ಲ ತಾನೆ ? || ೨ ||
ಸಹಪಾಠಿಗಳು ಎಲ್ಲ ಸಾಧನೆಯ ಚಪ್ಪರಲಿ
ಕುಳಿತು ಮೆರೆದಿಹರೆಂದು ನಾನು ಬಲ್ಲೆ ||
ಅವರ ಸಾಧನೆ ನೋಡಿ ಕರುಬಲಾರೆನು ನಾನು
ಸ್ಪರ್ಧೆಯಲ್ಲಿನ ಓಟ ನಾನು ಒಲ್ಲೆ || ೩ ||
ನನ್ನ ಜೀವದ ಸೃಷ್ಟಿ ನಾನು ನೋಡುವ ದೃಷ್ಟಿ
ಭಿನ್ನವಾಗಿಹುದಲ್ಲ ಬದುಕಿನೆಡೆಗೆ ||
ಪ್ರೀತಿಯಂಮೃತ ಕಲಶ ಉಕ್ಕಿಹುದು ಹೃದಯದಲಿ
ಹಂಚ ಹೊರಟಿಹೆ ನಾನು ವಿಶ್ವದೆಡೆಗೆ || ೪ ||
- ಸುರೇಖಾ ಭೀಮಗುಳಿ
14/12/2015
ಚಿತ್ರಕೃಪೆ : ಅಂತರ್ಜಾಲ
ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli
ತಾಯಿ ಹೌದು ಎಷ್ಟು ದಿನ
ಸಹಿಸಿಯೇನು ನೋವನು ? ||
ನೊಂದು ಬೆಂದು ಕೊರಗಿ ಮರುಗಿ
ಧಾರೆಯಾಗಿ ಸುರಿದೆನು || ೧ ||
ಹೆತ್ತ ತಾಯಿ ಅಮೃತವದು
ಮೆಚ್ಚಿ ಕುಡಿದು ತಣಿಯಲಿ ||
ಇನ್ನು ಬೇಕು ಮತ್ತು ಬೇಕು
ಎಂಬ ಹಠವ ತೊರೆಯಲಿ || ೨ ||
ದೈವ ಕೋಪ ಜನರ ಶಾಪ
ತಟ್ಟದಲೇ ಬಿಡುವುದೆ ? ||
ಇನ್ನಾದರೂ ಒಳಿತು ಬುದ್ಧಿ
ನಿಮ್ಮ ತಲೆಗೆ ಬರುವುದೆ ? || ೩ ||
ಕ್ಷಮಿಸು ತಾಯಿ ಮಕ್ಕಳಾಟ
ನಿನಗೆ ಕರುಣೆ ಬಾರದೆ ? ||
ಯಾರ ಹಠಕೆ ಯಾರೊ ಹೊಣೆ
ತಾಯೆ ಇದು ನ್ಯಾಯವೇ ? || ೪ ||
ಶಾಂತಳಾಗು ಬೇಗ ತಾಯೆ
ನೋಡಲಾರೆ ಬವಣೆಯ ||
ಆರ್ತನಾದ ಕೇಳಲಾರೆ
ಕ್ಷಣದಿ ಪೊರೆಯಲಾರೆಯ ? || ೫ ||
- ಸುರೇಖಾ ಭೀಮಗುಳಿ
04/12/2015
ಚಿತ್ರ : ಅಂತರ್ಜಾಲ
ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli
ಆ ತಾಯ* ದಾಹವದು ತೀರಿದರೆ ಸಾಕಿತ್ತು
ಇಡಿಯ ರಾಜ್ಯವೆ ನೀರು ಕುಡಿಯುತಿದೆ ಯಾಕೆ ? ||
ಊರಿಗೂರೆ ಮುಳುಗಿ ನಡುಗುತಿದೆ ನೋಡಿದಿರಾ ?
ಮುಗ್ಧ ಜನತೆಯ ಮೇಲೆ ಪ್ರಕೃತಿಯ ಕೇಕೆ || ೧ ||
ಮೇಘದಬ್ಬರ ನಿಲಿಸು ಕರುಣೆ ಮಳೆಯನು ಸುರಿಸು
ಇನ್ನಾದರೂ ಒಳಿತು ಬುದ್ಧಿ ಬರಲಿ ||
ನಮಗೆ ನೀರಿರದಿರೆ ಕಿತ್ತು ಕೇಳದೆ ಇರಲಿ
ಕಾವೇರಿಗಾಗಿ ಹಠ ಹಿಡಿಯದಿರಲಿ || ೨ ||
ತನ ತಾಯ ಪುಣ್ಯದಲಿ ಮಕ್ಕಳಿಗು ಪಾಲುಂಟೆ ?
ಪಾಪದಲ್ಲಿಯು ಪಾಲು ಅನಿವಾರ್ಯವೇ ? ||
ಪಾಪವೋ ? ಪುಣ್ಯವೋ ? ಹಳೆಯ ಕರ್ಮದ ಫಲವೊ ?
ಮಕ್ಕಳಿಗೆ ಈ ಶಿಕ್ಷೆ ಸರಿಯೆ ದೊರೆಯೆ ? || ೩ ||
- ಸುರೇಖಾ ಭೀಮಗುಳಿ
03/12/2015
ಚಿತ್ರಕೃಪೆ : ಅಂತರ್ಜಾಲ
ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli
*ಆ ತಾಯ = ತಮಿಳಮ್ಮ...