Wednesday, August 26, 2015

" ನನ್ನೂರ ರೈತ "

" ನನ್ನೂರ ರೈತ "
**************

ಕಂಬಳಿಯ ಕೊಪ್ಪೆಯಲಿ ಶೋಭಿಸಿಹ ರೈತನೇ
ಹುಟ್ಟೂರ ಪ್ರತಿನಿಧಿ ನನಗಾದೆ ನೀನು ||
ಹಗ್ಗದಾ ಸುರುಳಿಯನು ತಲೆಯಲ್ಲಿ ಸುತ್ತಿರುವೆ
ಹಸಿಹುಲ್ಲು ತರಲೆಂದು ಹೊರಟಿರುವೆಯೇನು ? || 1 ||

ನೆರೆದಿರುವ ಗಡ್ಡವದು ಎಷ್ಟೊಂದು ಸ್ಪಷ್ಟವಿದೆ
ಅನುಭವದ ಜೀವನದಿ ನೀನಾದೆ ಹಣ್ಣು ||
ಆಧುನಿಕತೆಯ ಹಂಗು ನಿನಗಿಲ್ಲ ಇಂದಿಗೂ
ಶುದ್ಧತೆಯ ಬದುಕನ್ನು ಸೂಸುತಿವೆ ಕಣ್ಣು || 2 ||

ಶುದ್ಧವಾಗಿಯೆ ಹೀಗೆ ಇದ್ದುಬಿಡು ಮುಂದೆ ಸಹ
ಮೆಚ್ಚುಲೀ ಭಗವಂತ ನಿನ್ನ ಬದುಕ ||
ಹುಚ್ಚು ಪ್ರಪಂಚವಿದು ಅಮಿಷಗಳನೊಡ್ಡುವುದು
ಅದರಲ್ಲಿ ಸಿಲುಕಿಹೆವು ಎಂಥ ಕುಹಕ ! || 3 ||

- ಸುರೇಖಾ ಭೀಮಗುಳಿ
26/08/2015
ಚಿತ್ರ ಕೃಪೆ : Sahana DN

Tuesday, August 11, 2015

" ಸುರಿಯುತಿದೆ ಜಲಧಾರೆ ....."


" ಸುರಿಯುತಿದೆ ಜಲಧಾರೆ ....."
*******************************

ಸುರಿಯುತಿದೆ ಜಲಧಾರೆ ಜಗದ ಕೊಳೆಯನು ತೊಳೆದು
ಭೋರ್ಗರೆವ ಸಡಗರದಿ ಉನ್ಮತ್ತವಾಗಿ ||
ಬಾಳೆಬರೆ ಘಾಟಿಯಾ ಪಯಣಿಗರ ಗಮನವನು
ತನ್ನತ್ತ ಸೆಳೆಯುತಿದೆ ತಾನುತಾನಾಗಿ || 1 ||

ಪ್ರಕೃತಿಯ ಸೊಬಗೇನು ಮೆರೆಯುವಾ ಪರಿಯೇನು 
ಸ್ತಬ್ಧವಾಗ್ವುದು ಒಮ್ಮೆ ಭಾವ ಜಾತ್ರೆ ||
ಅತಿಕ್ರಮಿಸಲು ಹೋಗಿ ಕಾಲು ಜಾರಿದರೊಮ್ಮೆ
ಆ ಕ್ಷಣದಿ ಮುಗಿಯುವುದು ಜೀವ ಯಾತ್ರೆ || 2 ||

ಸುರಲೋಕದಾ ಗಂಗೆ ಧುಮ್ಮಿಕ್ಕುತಿಹಳೇನು
ಭುವಿಯ ಮಕ್ಕಳ ಪಾಪ ತೊಳೆಯಲೆಂದು ||
ಅವಳಿಚ್ಚೆ ಫಲಿಸಿತೇ ? ನನಗೇನು ತಿಳಿಯದು
ನನಗಂತು ಮನಕ್ಲೇಶ ಕಳೆಯಿತಿಂದು || 3 ||

ತನಗೆ ಬೇಕಾದಂತೆ ಮಾತೆ ವಿಜೃಂಭಿಸಲಿ
ವೈಭವವ ನೋಡಿ ಮನ ತಣಿದುಬಿಡಲಿ ||
ಸೃಷ್ಟಿ ಒಡ್ಡೋಲಗದಿ ಬರಿ ಪ್ರೇಕ್ಷಕರು ನಾವು
ಸಂಭ್ರಮದ ವೀಕ್ಷಣೆಯು ನಮದಾಗಲಿ || 4 ||

- ಸುರೇಖಾ ಭಟ್ ಭೀಮಗುಳಿ
11/08/2015
ಚಿತ್ರ ಕೃಪೆ : Sunil Udupa

Saturday, August 8, 2015

" ಅತಿಥಿ "

ಇಂದು ಬೆಳಗಿನ ಹೊತ್ತು ನಮ್ಮ ಮನೆ ಅಂಗಳಕೆ
ಶುಕವೊಂದು ಬಂದಿತ್ತು ಅತಿಥಿಯಾಗಿ ||
ಇಂಚರದ ಶಬ್ದವನು ಗ್ರಹಿಸಿ ಮಗ ಓಡಿದನು
ಶುಕದ ಚಿತ್ರವ ತೆಗೆವ ಇಚ್ಚೆಯಾಗಿ || 1 ||

ರೂಪದರ್ಶಿಯ ತೆರದಿ ಬಗೆಬಗೆಯ ಚಹರೆಗಳ
ಕೊಟ್ಟು ಕುಳಿತಿತ್ತು ಶುಕ ಮೋಡಿ ಮಾಡಿ ||
ತೃಪ್ತಿಯಾಗುವವರೆಗೆ ತೆಗೆದುಕೋ ಪಟಗಳನು
ಎಂದುಲಿಯಿತೇ ಮಗನೆ ನಿನ್ನ ನೋಡಿ ? || 2 ||

ರತ್ನಗಂಧಿಗೆ ಬೀಜ ಮೆಲ್ಲುವುದ ನೋಡುತಲಿ
ಬೆರಗಾಗಿ ನಿಂತೆನು ಮೋಹದಲ್ಲಿ ||
ಕುತ್ತಿಗೆಯ ಬಳಸಿದಾ ಬಣ್ಣದಾ ಪಟ್ಟಿಯನು 
ಗಮನಿಸಿದೆ ನಾನಿಂದು ಸೂಕ್ಷ್ಮದಲ್ಲಿ || 3 ||

ಸೃಷ್ಟಿಯನು ಕೊಟ್ಟಿಹನು ದೃಷ್ಟಿಯನು ಕೊಟ್ಟಿಹನು
ಆ ದೇವನಾ ಕರುಣೆ ಎಷ್ಟಲ್ಲವೇ ? ||
ಸೃಷ್ಟಿಯನು ಸವಿಯುವಾ ಹೂ ಮನಸ ಕೊಟ್ಟಿಹನು
ಇದಕಿಂತ ಹೆಚ್ಚೇನು ಬೇಕಲ್ಲವೇ ? || 4 ||

- ಸುರೇಖಾ ಭಟ್ ಭೀಮಗುಳಿ
07/08/2015
ಚಿತ್ರ : ಸುಮಂತ್ ಭೀಮಗುಳಿ

"ಸ್ನೇಹಿತರ ದಿನ ನಮಗೆ ಬೇಕೇನು ?"

ಅಪ್ಪನಿಗೆ ಒಂದುದಿನ- ಅಮ್ಮನಿಗೆ ಒಂದುದಿನ
ಸ್ನೇಹತರಿಗೊಂದು ದಿನ ನಮಗೆ ಬೇಕೇನು ? || 
ಕೂರುವುದಕ್ಕೊಂದು ದಿನ- ನಿಲ್ಲುವುದಕ್ಕೊಂದು ದಿನ
ನಿದ್ರಿಸುವುಕ್ಕೊಂದು ದಿನ ಇರುವುದೇನು ? || 1 ||

ಪ್ರೀತಿಗೇ ಒಂದುದಿನ- ದ್ವೇಷಕ್ಕೆ ಒಂದುದಿನ
ಕೃತಕವೆನ್ನಿಸದೇನು ಈ ದಿನಚರಿ ? || 
ನೀತಿಗೇ ಒಂದುದಿನ- ಶಾಂತಿಗೇ ಒಂದುದಿನ
ಸತ್ಯಕ್ಕೆ ಒಂದುದಿನ ಮೀಸಲಿಡಿರಿ || 2 ||

ಬಾಲ್ಯದ ಕಾಲದಲಿ ಬಳಪ ಕೊಡುವವರನ್ನೆ
ಸ್ನೇಹಿತರಿವರೆಂದು ನಾನು ನಂಬಿದ್ದೆ ||
ಪ್ರೌಢಾವಸ್ಥೆ ಸಮಯ ಟಿಪ್ಪಣಿಯ ಪುಸ್ತಕದ
ವಿನಿಮಯದ ಸ್ನೇಹಿತರ ನಾನು ಹೊಂದಿದ್ದೆ || 3 ||

ಕೈಚಾಚಿದವರನ್ನು ದೂರಕಳುಹಲು ಇಲ್ಲ
ಸ್ನೇಹಕ್ಕೆ ಹಾತೊರೆದ ಹೊಸಮಂದಿಗೆ ||
ಕೈಬೀಸಿ ಹೊರಟವರ ತಡೆದು ನಿಲ್ಲಿಸಲಿಲ್ಲ
ಬೀಳ್ಕೊಟ್ಟೆ ಅವರನ್ನು ಅವರಿಚ್ಚೆಗೆ || 4 ||

ಓಘದ ಜೀವನದಿ ತುಂಬಿತೋ ತುಳುಕಿತೋ
ನಿಲುಕಲೇ ಇಲ್ಲವೇ ಮಾತು ಕತೆಗೆ || 
ಬಳಪ ಕೊಟ್ಟವರಿಂದ ಬಾಳು ಕೊಟ್ಟವರವರೆಗೆ
ಎಲ್ಲರೂ ಇಹರಿಲ್ಲಿ ನನ್ನ ಜೊತೆಗೆ || 5 ||

- ಸುರೇಖಾ ಭಟ್ ಭೀಮಗುಳಿ
೦3/08/2015
ಚಿತ್ರಕೃಪೆ : ಇಂಟರ್ ನೆಟ್

Sunday, August 2, 2015

" ಶ್ರಮಜೀವಿ "

ಸೆಗಣಿ ಉಂಡೆಯ ಮಾಡಿ ಹೊತ್ತೊಯ್ವೆ ಎಲ್ಲಿಗೇ ?
ಮಳೆನೀರು ಬಿದ್ದು ಅದು ಕರಗದೇನು ? ||
ಹೊತ್ತೊಯ್ದು ನೀನದನು ಇಡುವೆಯಾದರು ಎಲ್ಲಿ ?
ಕಲ್ಲಿನಾ ಅಡಿಯಲ್ಲಿ ಬಚ್ಚಿಡುವೆಯೇನು ? || 1 ||

ನೀವಿಬ್ಬರೊಡಗೂಡಿ ಮಾಡ್ವ ಸಾಹಸವೆಷ್ಟು ?
ನಿಮ್ಮ ಶ್ರಮವನು ಕಂಡು ಬೆರಗಾದೆನು || 
ನಿಮಗಿಂತ ಹತ್ತುಪಟ್ಟಿರಬಹುದೆ ನಿಮ್ಮ ಹೊರೆ ?
ಹೇಳಿಕೊಟ್ಟವರಾರು ಇಂಥ ಜಾಣ್ಮೆಯನು ? || 2 ||

ಪ್ರಕೃತಿಯ ಸೃಷ್ಟಿಯಲಿ ಮೇಲಿಲ್ಲ ಕೀಳಿಲ್ಲ
ಅವರವರ ದೃಷ್ಟಿಯಲಿ ಶ್ರೇಷ್ಠ ತಾನೆ ? || 
ಜೀವನದ ಪ್ರೀತಿಯಲಿ ಮೀರಿಸಿಹೆ ಎಲ್ಲರನು
"ಶ್ರಮಜೀವಿ" ಬಿರುದನ್ನು ಒಪ್ಪುತ್ತಿ ತಾನೆ ? || 3 ||

- ಸುರೇಖಾ ಭಟ್ ಭೀಮಗುಳಿ
30/07/2015
ಚಿತ್ರ ಕೃಪೆ : ಸುಮಂತ ಭೀಮಗುಳಿ