Thursday, March 14, 2019

“ಕೇವಲ ನಿನಗಾಗಿ..." #ಪ್ರೇಮರಾಗ -2


ಅಪ್ಪ-ಅಮ್ಮನ ಹಾಗೆ ಕಾಳಜಿಯ ವಹಿಸಿರುವೆ
ಒಪ್ಪಕ್ಕಳೆನ್ನುತ್ತ  ರಮಿಸಿ ಬರುವೆ ||
ತಪ್ಪುಗಳು ಬಲು ಸಹಜ ಒಪ್ಪಿಕೊಳ್ಳುತ ನಡೆವ
ಮುಪ್ಪುಣುವ ಕಾಲಕ್ಕು ಜೊತೆಯಲಿರುವೆ || ೧ ||

ಪ್ರೀತಿ ತೋರುತಲಿರುವೆ ಹೆತ್ತ ತಾಯಿಯ ರೀತಿ
ನೀತಿ ನಡೆ-ನುಡಿಯೆಲ್ಲ ತಂದೆಯಂತೆ ||
ಭೀತಿ ತೊಲಗಿಸುತಿರುವೆ ಸೋದರನ ರೀತಿಯಲಿ
ಮಾತೆಲ್ಲ ನನ್ನ ಮನವೊಪ್ಪುವಂತೆ || ೨ ||

ಭಾರಿ ಹೇಳಿದರೆನಗೆ ಬಂಧು-ಬಾಂಧವರೆಲ್ಲ
ನೂರು ಚಿಂತಿಸಬೇಡ - ಇವನು ಯೋಗ್ಯ ||
ಬೇರೇನು ಬೇಕಿಲ್ಲ- ನಿನ್ನೊಳಗೆ ಹುಳುಕಿಲ್ಲ
ಸಾರಿ ಹೇಳುವೆನೀಗ ನೀನೆನ್ನ ಭಾಗ್ಯ || ೩ ||

ಕಲ್ಲು ಸಕ್ಕರೆಯಂತೆ ಹೊರಗಿಂದ ನೀ ಕಠಿಣ
ಬೆಲ್ಲದಂತಹ ಮನಸು ಬಲ್ಲೆನಲ್ಲ ||
ಮೆಲ್ಲ ಮಾತಲಿ ಗೆಲುವ ಕಲೆಯೆನಗೆ ಕರಗತವು
ಒಲ್ಲೆನೆನ್ನುಲು ನಿನಗೆ ಅವಕಾಶವಿಲ್ಲ || ೪ || 😜

- ಸುರೇಖಾ ಭೀಮಗುಳಿ
14/03/2019
ಚಿತ್ರ : ಅಂತರ್ಜಾಲ

Tuesday, March 12, 2019

“ಕೇವಲ ನಿನಗಾಗಿ.... #ಪ್ರೇಮರಾಗ -1 ''


ಬಾಳಿನೆಡೆ ಭರವಸೆಯ ನನಗಾಗಿ ತಂದವನೆ
ನಾಳೆಯೆಡೆ ಹಾಕೋಣ ಕೂಡಿ ಹೆಜ್ಜೆ ||
ತಾಳಿಕೊಳ್ಳುವೆ ನಾನು ತವರೂರ ಸೆಳೆತವನು
ಬಾಳುವೆನು ನಿನ್ನೊಡನೆ ಕುಣಿಸಿ ಗೆಜ್ಜೆ || ೧ ||

ತೇಲು ದನಿಯಲಿ ನೀನು ನನ್ನನ್ನು ಕರೆದಾಗ 
ಹಾಲು ಜೇನಿನ ಜೊತೆಗೆ ಬೆರೆಸಿದಂತೆ ||
ಸಾಲು ಕಷ್ಟವೆ ಬರಲಿ ಸಾಗೋಣ ಜೊತೆಜೊತೆಗೆ
ನೀಲಿ ಬಾನಿನ ಜೋಡಿ ಪಕ್ಷಿಯಂತೆ || ೨ ||

ನಂಬಿಕೆಯೆ ಅಡಿಪಾಯ ನಮ್ಮ ಈ ಬಂಧನಕೆ
ಚುಂಬನದ ಸಿಹಿಯಿಹುದು ಸಾಕ್ಷಿಗಾಗಿ ||
ಹಂಬಲವ ಹೆಚ್ಚಿಸುವ ಮಾತು ನಿಲ್ಲಿಸು ಸಾಕು 
ತುಂಬಿ ಬಂದಿದೆ ಹೃದಯ ಪ್ರೀತಿಗಾಗಿ || ೩ ||

ನನಗಿಲ್ಲದಿಹ ಮೀಸೆ ನಿನಗೆ ಪ್ರಕೃತಿ ಕೊಡುಗೆ
ಮನದೊಳಗೆ ಅದರೆಡೆಗೆ ಸೆಳೆತವಿತ್ತು ||
ಕನಸೆಲ್ಲ ನನಸಾದ ಮೇಲೇಕೆ ಕಾಯಿಸುವೆ ?
ನನಗದನು ಚುಚ್ಚಿಸದೆ ನೀಡು ಮುತ್ತು || ೪ || 😜

- ಸುರೇಖಾ ಭೀಮಗುಳಿ
12/03/2019
ಚಿತ್ರ : ಅಂತರ್ಜಾಲ


Friday, December 7, 2018

" ಬಂಗಾರ... ಬಂಗಾರ.... ಬಂಗಾರ... "


ಬಂಗಾರ ಸ್ವಲ್ಪನಾದ್ರೂ ಬೇಕು ಕಣ್ರೀ....

ಹೆಣ್ಣು ಮಕ್ಕಳಿಗಿಷ್ಟು ಬಂಗಾರವಿರಬೇಕು
ಯೌವ್ವನದ ದಿನದಲದು ದಕ್ಕಬೇಕು ||
ದೇಹ-ವದನಗಳೆರಡು ಹೂವಿನಂತಿರುವಾಗ 
ಧರಿಸುವಂತಹ ಭಾಗ್ಯ ಸಿಕ್ಕಬೇಕು || ೧ ||

ತಾರುಣ್ಯವಿರುವಾಗ ಚಿನ್ನ ತೊಟ್ಟರೆ ಚಂದ
ಸಿರಿಮೊಗಕೆ ಮತ್ತಷ್ಟು ಆಕರ್ಷಣೆ ||
ಹರೆಯ ಕಳೆದಿಹ ದಿನದೊಳಾಭರಣ ಸಿಕ್ಕಿದರೆ
ಸಿರಿತನದ ತೋರ್ಪಡಿಕೆಗಷ್ಟೇ ಮಣೆ || ೨ ||

ತೋರ ಕುತ್ತಿಗೆಗೊಂದು ಕಂಠ ಮಾಲಿಕೆ ಧರಿಸೆ 
ನಾಯಿಬೆಲ್ಟಿನ ಹಾಗೆ ಕಾಣದೇನು ? ||
ತಲೆಗಿಷ್ಟು ಕಡುಗಪ್ಪು ಮುಖಕಿಷ್ಟು ಮೇಕಪ್ಪು
ಬಳಿದುಕೊಂಡರೆ ಮುಶಡಿ ಚಂದವೇನು ? || ೩ ||

ಆಭರಣವಿದೆಯೆನುತಲೈದಾರು ಸರ ಧರಿಸೆ
'ಚಿನ್ನದಂಗಡಿ ಬಂತು' ಎಂದೆನುವರು ||
'ನನ್ನ ಹಣ - ನನ್ನ ಸರ' ಎಂದುಕೊಂಡರೆ ಮನದಿ
ನಮ್ಮ ಹಿಂದೆಯೆ ಜನರು ನಗದೆಯಿರರು || ೪ ||

ಆದರೂ ಬೇಕಿಷ್ಟು ಸ್ವರ್ಣದಾಭರಣಗಳು 
ಸಂಸಾರ ಭದ್ರತೆಯ ದೃಷ್ಟಿಯಿಂದ ||
ಮನದೊಳಗದೊಂದಿಷ್ಟು ಸ್ಥೈರ್ಯವನು ತುಂಬುವುದು
ಪಾರು ಮಾಡುವುದೆಮ್ಮ ಕಷ್ಟದಿಂದ || ೫ ||

- ಸುರೇಖಾ ಭೀಮಗುಳಿ
07/12/2018
ಚಿತ್ರ : ಅಂತರ್ಜಾಲ

Thursday, December 6, 2018

" ಮಾತು ಬೆಳ್ಳಿ "

ಮಾತು ಬೆಳ್ಳಿ... ಮೌನ ಬಂಗಾರ .... ದೀರ್ಘ ಮೌನದ ನಂತರದ ಮಾತು ವಜ್ರ .... ಯಾರಿಗೆ ಬೇಕ್ರೀ ಬಂಗಾರ- ವಜ್ರ ? ನಮಗೆ ಬೆಳ್ಳಿಯೇ ಸಾಕು ... ಖುಷಿ ಬಂದಷ್ಟು ವಟವಟ ಅನ್ಕೊಂಡು ಹಾಯಾಗಿರೋಣ .... ಆಗದಾ ? ನೀವ್ ಏನಂತೀರಿ ? 

ಮಾತದೋ ಬೆಳ್ಳಿಯೊಲ್ ಮೌನವದು ಬಂಗಾರ
ಮೌನದಾಚಿನ ಮಾತು ವಜ್ರವಂತೆ ||
ವಜ್ರವದು ಬಲು ಕಠಿಣ ಬಂಗಾರ ಶೃಂಗಾರ
ಬೆಳ್ಳಿ ಹತ್ತಿರ ಮನಕೆ ಗೆಜ್ಜೆಯಂತೆ || ೧ ||

ಮಾತಾಡಬಲ್ಲವರು ಮಾತನಾಡಲುಬೇಕು
ಮಾತಾಡೆ ಬಾರದಿರೆ ಕಿವಿಯಾಗಬೇಕು ||
ಮಾತೆಂಬುದೇ ನಮ್ಮ ಭಾವಬದುಕಿನ ಸೇತು 
ಮಾತಿಲ್ಲದಿರಲದುವು ಮೃಗದ ಬದುಕು || ೨ ||

ಗೆಜ್ಜೆಯಂತೆಯೆ ನಮ್ಮ ನುಡಿಯುಲಿತವಿರಬೇಕು
ಸ್ವರ್ಣದಮೃತದ ಕಲಶ ಎದೆಯೊಳಿರಬೇಕು ||
ವಜ್ರ ಸದೃಶದ ಕಠಿಣ ಮನದ ನಿರ್ಧಾರಗಳು
ಈ ಬದುಕ ಬಂಡಿಯನ್ನೆಳೆಯಬೇಕು || ೩ ||

- ಸುರೇಖಾ ಭೀಮಗುಳಿ
07/12/2018
ಚಿತ್ರ : ಅಂತರ್ಜಾಲ
ತಿದ್ದುಪಡಿ ಮಾರ್ಗದರ್ಶನ - ಅರಿಸಮಾಸದ ಅರಿಗಳನ್ನು ಸಂ’ಹರಿ’ಸಿದವರು: ವಿಶ್ವ ಸರ್

Thursday, November 15, 2018

" ಜ್ಞಾನೋದಯವಾದ ಹೊತ್ತು...... " - ದ್ವಿತೀಯ ಕಂತು.....


"ವಾನಪ್ರಸ್ಥ" ಅಂದ ಕೂಡ್ಲೆ ಅದೇನು ಹಾಗೆ ಬೆಚ್ಚಿಬೀಳ್ತೀರಿ ಮಾರ್ರೆ ? ಯಪ್ಪಾ..... !!!

( https://www.facebook.com/profile.php?id=100007315925874 ದ ಮುಂದುವರೆದ ಭಾಗ )

ವಾನಪ್ರಸ್ಥಕ್ಕೆನಲು ಹೆದರಿಕೊಂಡಿರಿಯೇಕೆ ?
ಕರ್ಮಬಂಧನದೊಳಗೆ ಸೆಳೆತವೇಕೆ ? ||
’ನಾನೀಗ ಬರಲಾರೆ ನನದಿನ್ನು ಎಳೆಪ್ರಾಯ’
’ಅಷ್ಟು ಮುದುಕಿಯೆ ನೀನು ?’ ಎನುವಿರೇಕೆ ? || ೧ ||

ವಾನಪ್ರಸ್ಥಾಶ್ರಮಕೆ ವಯಸಾಗಬೇಕಿಲ್ಲ
ಸಂಸಾರದೊಳಗಿದ್ದು ಮಾಗಬೇಕು ||
ಪದ್ಮಪತ್ರದೊಳಿರುವ ನೀರಹನಿ ತೆರದಲ್ಲಿ
ಅಂಟಿಯಂಟದ ಸ್ಥಿತಿಯ ಹೊಂದಬೇಕು || ೨ ||

ವಾನಪ್ರಸ್ಥಾಶ್ರಮಕೆ ವನವೆಬೇಕೆಂದಿಲ್ಲ
ನಮ್ಮೊಳಗೆ ನಿರ್ಲಿಪ್ತವಾಗಬೇಕು ||
ನಾನು ನನ್ನವರೆಂಬ ಮೋಹವನು ತೊರೆಯುತಲಿ
ಬಂದದ್ದು ಸೌಭಾಗ್ಯವೆನ್ನಬೇಕು || ೩ ||

ಸಂಸಾರದೊಳಗಿದ್ದು ಮನವ ಹದಗೊಳಿಸುತ್ತ
ಬಂದ ಕರ್ತವ್ಯಗಳ ಮಾಡಬೇಕು ||
ನಮ್ಮಾಟ ಮುಗಿದೊಡನೆ ಹೊರಟು ನಿಲ್ಲುವುದಕ್ಕೆ
ಸ್ಥಿತಪ್ರಜ್ಞ ಭಾವವನು ತಾಳಬೇಕು || ೪ ||

- ಸುರೇಖಾ ಭೀಮಗುಳಿ
15/11/2018
ತಿದ್ದುಪಡಿ ಮಾರ್ಗದರ್ಶನ : ವಿಶ್ವ ಸರ್.
ಚಿತ್ರ : ಅಂತರ್ಜಾಲ

Friday, November 9, 2018

" ಜ್ಞಾನೋದಯವಾದ ಹೊತ್ತು...... "

ವಾನಪ್ರಸ್ಥಕ್ಕೆ ಯಾರೆಲ್ಲ ಬರ್ತೀರಿ ? ಹೊರಡಿ ಹೊರಡಿ....

’ಯಾರು ನನ್ನವರಲ್ಲ ನನ್ನವರು ಯಾರಿಲ್ಲ 
ಏಕಾಂಗಿ ನಾ ಜಗದಿ’ - ಇದುವೆ ಸತ್ಯ ||
’ಯಾರೆಲ್ಲ ನನಗಾಗಿ ?’ - ಎನ್ನುತರಸುವೆನಲ್ಲ  
ಬಂಧವೆನ್ನುವುದೊಂದು ಶುದ್ಧ ಮಿಥ್ಯ || ೧ ||

’ನನ್ನ ಬದುಕಿನ ಹೊರೆಯ ನಾನೆ ಸಾಗಿಸಬೇಕು’
ಎಂಬ ಮಾತಿನ ಮರ್ಮದರಿವಾಯಿತು ||
ಯಾರೆನಗೆ ಪರಮಾಪ್ತರೆಂಬ ಹುಡುಕಾಟದಲೆ  
ಬದುಕಿನರ್ಧದ ಪಯಣ ಮುಗಿದು ಹೋಯ್ತು || ೨ ||

ಎದುರಲ್ಲಿ ಬಂದವರು ನಕ್ಕು ಸ್ನೇಹವ ಬಯಸೆ
ನಾನೂನು ನಗಬೇಕು ವಿಶ್ವಾಸ ತುಂಬಿ ||
ದೊರೆತ ಸ್ನೇಹದ ಬಗ್ಗೆ ಸಂಭ್ರಮಿಸಬೇಕಿಲ್ಲ
ಈ ಬಂಧ ಶಾಶ್ವತವದೆಂದು ನಂಬಿ || ೩ ||

ಬಂದಬಂದವರನ್ನು ಮನೆಯೊಳಗೆ ಕರೆಯುವರೆ
ಪಡಸಾಲೆಯಲ್ಲಷ್ಟೆ ಪವಡಿಸುವ ಹಕ್ಕು ||
ಯಾರ್ಯಾರನೆಲ್ಲೆಲ್ಲಿ ನಿರ್ಧರಿಪ ಬುದ್ಧಿಯಿದೆ
ಅದಕೇನು ಹಿಡಿದಿಲ್ಲವಿನ್ನು ತುಕ್ಕು || ೪ ||

ಮುಗುಳು ನಗೆಯನು ಬೀರಿ ಸ್ನೇಹ ಹಸ್ತವ ಚಾಚಿ 
ಬಂದವರ ಕೈಮುಗಿದು ಸ್ವಾಗತಿಸಬೇಕು ||
ಹೊರಟೆನೆ‌ನ್ನುವ ಕ್ಷಣದಿ ಮತ್ತೆ ಗೋಗರೆಯದೆಯೆ
ಭೇಟಿಯಿದು ಖುಷಿಯಾಯಿತೆನ್ನಬೇಕು || ೫ ||

ಎಲ್ಲರೂ ನಶ್ವರರು - ನಶ್ವರವದೀಜಗವು
ವೇದಾಂತ ವಾಣಿಯಲಿ ಸತ್ಯವುಂಟು ||
ಸ್ನೇಹ ಸಂಬಂಧಗಳು ಮಿತಿಯ ಮೀರಿರುವಲ್ಲಿ
ಶಾಂತಿ ನೆಮ್ಮದಿಯೆಲ್ಲ ಕನ್ನಡಿಯ ಗಂಟು || ೬ ||

- ಸುರೇಖಾ ಭೀಮಗುಳಿ
ಸ್ಥಳ : ಭೋಗನಂದೀಶ್ವರ, ನಂದೀಗ್ರಾಮ, ಚಿಕ್ಕಬಳ್ಳಾಪುರ
ಜ್ಞಾನೋದಯವಾದ ಸಮಯ : 06/11/2018 ರ ಬೆಳಗಿನ 12:18 
ಪದ್ಯರೂಪ : 09/11/2018
ತಿದ್ದುಪಡಿ ಮಾರ್ಗದರ್ಶನ : ವಿಶ್ವ ಸರ್.
ಚಿತ್ರ : ಸುಮಂತ ಭೀಮಗುಳಿ
ರೂಪದರ್ಶಿ : ನಾನೇ ಕಣ್ರೀ.....

Saturday, September 22, 2018

"ಕಡಕೊಡ್ರೀ - ಬಡ್ಡಿ ಕೊಡ್ತೀನಿ..." 😂


ಬಾಳೊಂದು ಮಾಯೆ ನೀರಸದ ಛಾಯೆ
ಉತ್ಸಾಹವೆಲ್ಲಿ ಹೋಯ್ತು ? ||
ಬೋಳಾಯ್ತು ಬದುಕು ಹಾಳಾಯ್ತು ಮನಸು
ಮಾಧುರ್ಯವಿಲ್ಲವಾಯ್ತು || ೧ ||

ಮನದೊಳಗೆ ಬಯಕೆ ಸವಿಮಾತ ನೆನಕೆ
ಬಯಸುತಿಹೆ ಪ್ರೀತಿಯೊರತೆ ||
ಕನಸಿಲ್ಲದಿರಲು ಮನ ಮುದುರಿತೀಗ
ಭಾವಕ್ಕು ಬಂತು ಕೊರತೆ || ೨ ||

ಭಾವಗಳಭಾವ ಕಾಡಿರುವ ಹೊತ್ತು
ನಿಮಗೇತಕಿಂತ ಮೌನ ? ||
ತಾವಾಗಿ ಬಂದು ಸಹಕರಿಸಲೆಂದು
ಮನದೊಳಗೆ ನಿಮದೆ ಧ್ಯಾನ || ೩ ||

ಸವಿಸವಿಯಮಾತು ಜೊತೆಯಲ್ಲಿ ಕೂತು
ತಡೆದಿಹುದೆ ನಿಮ್ಮ ಬಿಂಕ ? ||
ಕವಿಮನದೊಳಿಂದು ಕನವರಿಕೆಗಾಗಿ
ಬಿದ್ದಿಹುದು ಭಾರಿ ಸುಂಕ || ೪ ||

ಒಂದಿಷ್ಟು ಖುಷಿಯ ಮತ್ತಷ್ಟು ನಗುವ
ಕಡವನ್ನು ಕೊಡರಿ ನನಗೆ ||
ಒಂದಕ್ಕೆ ಎರಡು ಬಡ್ಡಿಯನು ಕೂಡಿ
ಮರಳಿಸುವೆ ನಾಳೆ ನಿಮಗೆ || ೫ ||

- ಸುರೇಖಾ ಭೀಮಗುಳಿ
22/09/2018
ಚಿತ್ರ: ಅಂತರ್ಜಾಲ