
ದಿನರಾತ್ರಿ ಕಳೆಯುತಿದೆ ಸದ್ದುಸುದ್ದಿಗಳಿರದೆ
ಘನವಾದ ಉದ್ದೇಶ ಬಾಳಿಗಿರದೆ ||
ಮನದೊಳಗೆ ಹೀಗೇಕೆ ಹೆಪ್ಪುಗಟ್ಟಿತು ಮೌನ
ಕನಸೆಲ್ಲ ದಿಕ್ಕೆಟ್ಟು ಕಳೆಗುಂದಿದೆ || ೧ ||
ಕನವರಿಕೆಯೆಳೆಯಿಲ್ಲ ಬೇಕುಗಳ ಸುಳಿವಿಲ್ಲ
ಮನಸಿನೊಳಗಡೆ ಭಾವದೊರತೆಯಿಲ್ಲ ||
ಕೊನೆಯಿರದ ಸುಳಿಯಲ್ಲಿ ಸಿಕ್ಕಿಕೊಂಡಿಹೆನಲ್ಲ
ಸನಿಹವಿಹ ಯಾವೆಡೆಗು ಸೆಳೆತವಿಲ್ಲ || ೨ ||
ಒಪ್ಪ-ಓರಣವಿಲ್ಲ ಜೀವನದಿ ಹುರುಪಿಲ್ಲ
ಕಪ್ಪುಮಸಿ ಚೆಲ್ಲಿಹುದು ಮನದ ತುಂಬ ||
ತಪ್ಪಿಹೋಗಿದೆ ನನ್ನ ಭಾವಕೋಶದ ಕೊಂಡಿ
ಒಪ್ಪಿರುವೆ ನಾನದರ ಶುದ್ಧ ಬಿಂಬ || ೩ ||
ಊಟದಲಿ ರುಚಿಯಿಲ್ಲ ಸಿಂಗಾರ ಬೇಕಿಲ್ಲ
ಕೂಟ ಗೋಷ್ಠಿಗಳಲ್ಲಿ ಗಮನವಿಲ್ಲ ||
ನೋಟದಲೆ ಹೃದಯವನು ಸೂರೆಗೊಂಡವನನ್ನು
ಭೇಟಿಮಾಡಲು(ಬೇಟೆಯಾಡಲು 😜) ಮನವು ಕಾಯುತಿದೆಯಲ್ಲ || ೪ ||
- ಸುರೇಖಾ ಭೀಮಗುಳಿ
18/01/2018
ಚಿತ್ರ : ಸಹೆ ಗೋಡೆಯಿಂದ
ತಿದ್ದುಪಡಿ ಮಾರ್ಗದರ್ಶನ : ವಿಶ್ವ ಸರ್.
No comments:
Post a Comment