Thursday, September 29, 2016

" ಕಾಡದಿರು ಮನವೇ...... "


ಬೇಡವೆಂದರು ಏಕೆ ಮತ್ತೆ ನೀ ಕೊರಗುತಿಹೆ
ಕಾಡದಿರು ಓ ಮನವೆ ನೀನು ಹೀಗೆ ||
ಮಾಡದಿರು ಘಾಸಿಯನು ಹಳೆನೆನಪ ಕೆದಕುತಲಿ
ದೂಡದಿರು ನನ್ನನ್ನು ಇನ್ನು ಕೆಳಗೆ || ೧ ||

ಬದುಕೆಮಗೆ ಕೊಟ್ಟಿಹುದು ಮೃದುಮಧುರ ಅನುಭೂತಿ
ಅದು ನಿನಗೆ ಬೇಕಿಲ್ಲ ಮೆಲ್ಲುವುದಕೆ ||
ಬದಲಾಗಿ ಕಹಿನೆನಪ ಮತ್ತೆ ಮತ್ತೇ ನೆನೆದು
ಕೆದಕುತ್ತ ಗೋಳಿಡುವ ಹುಚ್ಚದೇಕೆ ? || ೨ ||

ಚಿತ್ತದಲಿ ಹೊಳೆಯುವವು ಹಲವಾರು ಚಿತ್ರಗಳು
ಸತ್ತಂತೆ ಉಳಿದಿಹವು ಇನ್ನು ಕೆಲವು ||
ಮತ್ತದರ ಮಧ್ಯದಲಿ ಬೇಕಾದ್ದ ನೀವಾಯ್ದು
ಉತ್ತಮವ ಮೆರೆಸುವುದು ನನ್ನ ಒಲವು || ೩ ||

ಹೊರಜಗವು ದರ್ಪಣವು ನಿನ್ನದೆ ಪ್ರತಿಬಿಂಬ
ಪರರಿಗಾಗಿಯೆ ಸಲಲಿ ನಿನ್ನ ನಗುವು ||
ಕೊರಗುತ್ತ ಕುಳಿತಿರಲು ನೀ ಒಂಟಿಯಾಗುವೆಯೊ
ಅರಳುತ್ತಲಿರಲೆಂದು ನಿನ್ನ ಮೊಗವು || ೪ ||

- ಸುರೇಖಾ ಭೀಮಗುಳಿ
29/09/2016
ಚಿತ್ರ : ಅಂತರ್ಜಾಲ

Friday, September 23, 2016

" ಬಿಕ್ಕಳಿಸುತ್ತಿರುವ ಮನಕ್ಕೊಂದಿಷ್ಟು ಸಾಂತ್ವನ "


ಉಕ್ಕಿ ಬರುತಿದೆ ದುಃಖ ಬಿಕ್ಕಳಿಸುತಿದೆ ಮನಸು
ಸುಕ್ಕುಗಟ್ಟಿದೆ ಮೌನ ಯಾಕೆ ಹೀಗೆ ? ||
ದಿಕ್ಕು ತಪ್ಪಿದೆ ಸ್ನೇಹ ಹಕ್ಕು ಸಾಧಿಸಲರಿಯೆ
ಸಿಕ್ಕೀತೆ ಪರಿಹಾರ ಕಟ್ಟಕಡೆಗೆ ? || ೧ ||

ದಿಕ್ಕುಗೆಟ್ಟವರಂತೆ ಮುಕ್ಕಾಗದಿರು ಮನವೆ
ದಕ್ಕಲೇ ಬೇಕೆಂಬ ಹಠವದೇಕೆ ? ||
ಪಕ್ಕಾಗಲೀ ಸಮಯ ಚೊಕ್ಕಗೊಳ್ಳಲಿ ಹೃದಯ
ತಿಕ್ಕಾಟವದು ಸಹಜ ಬದುಕುವುದಕೆ || ೨ ||

ತಿಕ್ಕಿದಾಗಲೆ ಚಿನ್ನ ಚಕ್ಕಂಥ ಹೊಳೆಯುವುದು
ಚಿಕ್ಕ ನೆವವೂ ಸಾಕು ಸ್ವಂತ ಖುಷಿಗೆ ||
ನಕ್ಕುಬಿಡು ಒಂದು ಕ್ಷಣ ಮಿಕ್ಕಿದ್ದ ವಿಧಿಗೆ ಬಿಡು
ಸಕ್ಕರೆಯ ಸವಿಯುಂಟು ನಿನ್ನ ನಗೆಗೆ || ೩ ||

- ಸುರೇಖಾ ಭೀಮಗುಳಿ

23/09/2016
ಚಿತ್ರ : ಅಂತರ್ಜಾಲ

" ಓ ಮಗುವೆ "



ಹದಿನೆಂಟು ವರ್ಷಗಳು ಕಳೆದು ಹೋದವು ಹೇಗೆ ?
ಹದಿನೇಳು ಮತ್ತೊಂದು ದಿನದ ಹಾಗೆ ||
ಹೂವು ಅರಳುವ ತೆರದಿ ಬಿರಿದೆ ನನ್ನೊಡಲಲ್ಲಿ
ಬದುಕು ಸಾರ್ಥಕವಾಯ್ತು ನಿನ್ನ ಜೊತೆಗೆ || ೧ ||

ಮೋದಗೊಂಡಿತ್ತು ಮನ ನಿನ್ನ ಮೊಗವನು ನೋಡಿ
ಓ ಮಗುವೆ ಓ ನಗುವೆ ಎಲ್ಲಿಂದ ಬಂದೆ ? ||
ದಾಂಪತ್ಯ ಫಲಿಸಿತ್ತು ನಿನ್ನ ಬರುವಿನ ಜೊತೆಗೆ
ಕಳಿಸಿಕೊಟ್ಟನೆ ನಿನ್ನ ಈ ಜಗದ ತಂದೆ ? || ೨ ||


ನಿನ್ನ ಗುಂಡನೆ ಕೆನ್ನೆ ಮುದ್ದು ಕೈ ಕಾಲುಗಳು
ಪುಟ್ಟ ತುಟಿಗಳ ನಿನ್ನ ಬೊಚ್ಚು ಬಾಯಿ ||
ದೇವಲೋಕದ ಸಿರಿಯೆ ನಮಗಾಗಿ ಧರೆಗಿಳಿಯೆ
ಎನಿಸಿಕೊಂಡೆನು ನಾನು ನಿನ್ನ ತಾಯಿ || ೩ ||

ಹದಿನೆಂಟು ವರ್ಷದಲಿ ಎಷ್ಟೆಲ್ಲ ಬದಲಾಯ್ತು ?
ನನಗಿಂತ ಹತ್ತಿಂಚು ನೀನು ಹೆಚ್ಚು ||
ತಾಯಿ ಭಾರತಿ ಋಣವ ತೀರಿಸುವ ಹೊಣೆಯಿಹುದು
ಆಗು ನೀನೆಲ್ಲರಿಗು ಅಚ್ಚು ಮೆಚ್ಚು || ೪ ||

- ಸುರೇಖಾ ಭೀಮಗುಳಿ
22/09/2016
ಚಿತ್ರ : ನಾನು ಮತ್ತು ಸುಮಂತ (ಹದಿನೇಳು ವರ್ಷದ ಹಿಂದೆ)

Wednesday, September 14, 2016

" ಒಂದು ನೆನಪು "



ಜೇಡ ಕಟ್ಟಿದ ಬಲೆಯ ಇಬ್ಬನಿಯ ಚಿತ್ತಾರ
ಮುತ್ತು ಮಣಿ ಶೃಂಗಾರ ಒಂದು ನೆನಪು ||
ಅಡಿಕೆ ತೋಟದ ನಡುವೆ ಆ ಬಲೆಯು ಕಡಿದಾಗ
ಪಾಪ ಪ್ರಜ್ಞೆಯು ಇರಿದ ಒಂದು ನೆನಪು || ೧ ||


ದೂರ ಬೆಟ್ಟವನೆಲ್ಲ ಮಂಜು ಮುಸುಕಿದ ಹೊತ್ತು
ಅದು ಮಾಗಿ ಮುಂಜಾವು ಒಂದು ನೆನಪು ||
ರವಿಕಿರಣ ಸ್ಪರ್ಶದಲಿ ಆ ತೆರೆಯು ಸರಿದಾಗ
ಪ್ರಕೃತಿ ಸೊಬಗದು ಮೆರೆದ ಒಂದು ನೆನಪು || ೨ ||


ಅರುಣ ಉದಯದ ಸಮಯ ಹೊಳೆಯ ನೀರಿನ ಮೇಲೆ
ತೆಳು ಹಬೆಯ ಗಮನಿಸಿದ ಒಂದು ನೆನಪು ||
ಹೊಳೆಸ್ನಾನದಾಸೆಯಲಿ ತುಂಗೆ ಮಡಿಲನು ಸೇರಿ
ಸಮಯ ಪ್ರಜ್ಞೆಯ ಮರೆತ ಒಂದು ನೆನಪು || ೩ ||


ನನಗೇಕೆ ಆಗಾಗ ಕನವರಿಕೆಯಾ ಮೋಹ ?
ಕನಸಿನಲು ಬರುತಾವೆ ಹಳೆಯ ನೆನಪು ||
ನಿಜವ ಹೇಳಿರಿ ನನಗೆ- ಕಾಡಲಾರವೆ ನಿಮಗೆ ?
ಬಾಲ್ಯ ಕಾಲದ ಸವಿಯ ಒಂದು ನೆನಪು || ೪ ||


- ಸುರೇಖಾ ಭೀಮಗುಳಿ
14/09/2016
ಚಿತ್ರ : ಅಂತರ್ಜಾಲ