Monday, February 29, 2016

" ಕಾವ್ಯಕನ್ನಿಕೆಯ ಕೋಪ "

ಕೋಪದಲಿ ಬೆಂದಿಹಳು ನನ್ನ ಮುದ್ದಿನ ಮಗಳು
ಕಾವ್ಯ ಕನ್ನಿಕೆಗಿಂದು ನೋವಾಗಿದೆ ||
ಬೇಸರದಿ ನೊಂದಿಹಳು ಮೃದು ಮನವು ಬಾಡಿಹುದು
ಮುತ್ತಿಟ್ಟು ಉಪಚರಿಸಬೇಕಾಗಿದೆ || ೧ ||

ಗದ್ಯದುಪಚಾರದಲಿ ನನ್ನ ಮೆರೆತಿಹಳಮ್ಮ
ಎಂಬ ಕೊರಗದು ನನ್ನ ಕಾವ್ಯಕನ್ನಿಕೆಗೆ ||
ನೋವುಂಡು ಗೊತ್ತಿಲ್ಲ ಸೂಕ್ಷ್ಮಮನ
ವಳೀಕೆ
ಬಿಕ್ಕುತ್ತ ಕುಳಿತಿಹಳು ಮಡಿಲಿನೊಳಗೆ || ೨ ||

ದಿನದಿನವು ಹೊಸಕಥೆಯ ಹೆಣೆಯುತ್ತ ಕುಳಿತಿರುವೆ
ದೂರುತಿರುವಳು ಮಗಳು ಮುನಿಸಿನಿಂದ ||
ಆಗಾಗ ಸಂತೈಸಿ ಮುದ್ದಿಸದೆ ಹೋದರೇ
ಸಹಿಸಲಾಗದು ನೋವು ಆಕೆಯಿಂದ || ೩ ||

ಏನು ಮಾಡಲಿ ಹೇಳಿ ? ಹೇಗೆ ಸಮಧಾನಿಸಲಿ ?
ಕಥೆಯ ಬರೆಯೆಂದವರು ನೀವಲ್ಲವೇ ? ||
ಮಗಳ ಸಂತ್ವನಕಿಂದು ಹೊಸ ವಿದ್ಯೆ ಹೇಳಿಕೊಡಿ
ನನ್ನ ಸ್ನೇಹಿತರೆಂದು ನೀವಿಲ್ಲವೇ ? || ೪ ||

- ಸುರೇಖಾ ಭೀಮಗುಳಿ
01/03/2016
ಚಿತ್ರ : ಅಂತರ್ಜಾಲ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Monday, February 22, 2016

" ತಮ್ಮ ಬೇಕು ನನಗೆ ತಮ್ಮ ಬೇಕು...."

ತಮ್ಮ ಬೇಕು ನನಗೆ ತಮ್ಮ ಬೇಕು....
ನನ್ನ ಹಾಗೆ ಇರುವ ಒಬ್ಬ ತಮ್ಮ ಬೇಕು....|

ಆಡುವುದಕೆ ಹಾಡುವುದಕೆ
ಮತ್ತೆ ಲೂಟಿ ಮಾಡುವುದಕೆ
ಓದುವುದಕೆ ಬರೆಯುವುದಕೆ
ಕದ್ದು ತಂಟೆ ಮಾಡುವುದಕೆ

ತಮ್ಮ ಬೇಕು ನನಗೆ ತಮ್ಮ ಬೇಕು....
ನಾನು ಹೇಳಿದಂಗೆ ಕೇಳ್ವ ತಮ್ಮ ಬೇಕು....

ಉಣ್ಣುವುದಕೆ ತಿನ್ನುವುದಕೆ
ಕೂಡಿ ಜಗಳವಾಡುವುದಕೆ
ಊರು ಕೇರಿ ಸುತ್ತುವುದಕೆ
ಜೊತೆಗೆ ಸೈಕಲ್ ಹೊಡೆಯುವುದಕೆ

ತಮ್ಮ ಬೇಕು ನನಗೆ ತಮ್ಮ ಬೇಕು....
ಇದ್ದದನ್ನು ಹಂಚಿಕೊಳಲು ತಮ್ಮ ಬೇಕು....

ಮೋಜು ಮಸ್ತಿ ಮಾಡುವುದಕೆ
ನಗುವ ಜಗಕೆ ಹಂಚುವುದಕೆ
ಪ್ರೀತಿ ಸುಖದ ವಿನಿಮಯಕ್ಕೆ
ಮುದ್ದುಗರೆದು ಮಲಗುವುದಕೆ

ತಮ್ಮ ಬೇಕು ನನಗೆ ತಮ್ಮ ಬೇಕು....
ನೀನು ನನ್ನ ತಮ್ಮನೆಂಬ ಹೆಮ್ಮೆ ಬೇಕು....

- ಸುರೇಖಾ ಭೀಮಗುಳಿ
23/02/2016
ಚಿತ್ರ : 12 ವರ್ಷದ ಹಿಂದೆ ನಾನೇ ತೆಗೆದದ್ದು ...

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli