Saturday, February 28, 2015

"ಅರಳುತಿದೆ ಅಂತರಂಗ "

ಬಾಲ್ಯ-ಯೌವನ ಕಳೆದು, ಬದುಕಿನರ್ಧವು ಮುಗಿದು;
ಮುಪ್ಪು ಬಂದೆನ್ನ ಕೈ ಜಗ್ಗುತಿಹುದೆ ? ||
ಎಷ್ಟು ಗಳಿಸಿದೆ ನಾನು ? ಎಷ್ಟು ವ್ಯಯಿಸಿದೆ ನಾ ? 
ಉಳಿಸಿಹೆನು ಏನನ್ನು ಜಗದ ಮನೆಗೆ ? ||೧||

ಇತಿಯಿಲ್ಲ ಮಿತಿಯಿಲ್ಲ ಬಯಕೆಯಾ ಕೂಪಕ್ಕೆ
ಗಳಿಕೆ ಎಷ್ಟಿದ್ದರೂ ಇನ್ನು ಬೇಕು ||
ಇಷ್ಟಿದ್ದರೂ ಸಾಕು ಅಷ್ಟಿದ್ದರೂ ಬೇಕು
ಬರಿಗೈಲಿ ತೆರಳುವೆನು ದೇವರೆಡೆಗೆ ||೨||

ಸಿರಿಸಂಪತ್ತುಗಳನು ಕೂಡಿಕೊಂಡರಾಯ್ತೆ ?
ಅದನು ಕಾಯುವ ಹೊಣೆಯು ನಮ್ಮದೇನೆ ||
ಹೊಣೆ ಹೊರುವ ಕಾಯಕದಿ ಮುಳುಗಿಹೋದರೆ ಒಮ್ಮೆ 
ಬದುಕ ಸವಿಯಲು ನಮಗೆ ಸಮಯವಿಲ್ಲ ||೩||

ಬೇಕು ಬೇಕದು ಬೇಕು ಬೇಕೆನಗಿದಿನ್ನೊಂದು
"ಬೇಕು ದೆವ್ವ"ದ ಜೊತೆಗೆ ನಮ್ಮ ಸಂಗ ||
ಸಾಕಪ್ಪ ಸಾಕೆನಗೆ ಎನಲು ನಾ ತೊಡಗಿಹೆನು
ಸಂತಸದಿ ಅರಳುತಿದೆ ಅಂತರಂಗ ||೪||

-ಸುರೇಖಾ ಭಟ್, ಭೀಮಗುಳಿ
28/02/2015

Sunday, February 15, 2015

"ಸಾರ್ಥಕ ಬದುಕು"

ಬಾಲ್ಯವು ಕಳೆದರೂ ಮಗುತನವೊಂದನು
ಕಾಪಿಟ್ಟಿರುವೆನು ಮನದೊಳಗೆ |
ಬಾಲ್ಯದ ನೆನಪಿನ ಹಂದರವೊಂದದು
ಚಿಗುರುತ್ತಲೆ ಇದೆ ಎನ್ನೊಳಗೆ ||೧||

ಕಳೆದಿಹ ವಯಸಿನ ಚಿಂತೆಯು ಏತಕೆ
ಮುಪ್ಪೇನಿದ್ದರೂ ನಶ್ವರಕೆ |
ಮನಸಲಿ ತುಂಬಿದೆ ನೂತನ ಹರೆಯಾ
ಹಪಹಪಿಸಿದೆ ಹೊಸ ಅನುಭವಕೆ ||೨||

ಪ್ರತಿಫಲ ಬಯಸದ ಗೆಳೆತನ ಬೆಳೆಸಲು
ಸಕಾಲ ಬಂದಿರೆ ಹೆಮ್ಮೆಪಡಿ |
ಸದಭಿಪ್ರಾಯದ ಸದಭಿರುಚಿಯಾ
ಗೆಳೆಯರ ಗುಂಪನು ಸೇರಿಬಿಡಿ ||೩||

ಚಂದದ ಅಭಿರುಚಿ ಉಳಿಸಲು, ಬೆಳೆಸಲು,
ಹೊಂದಲು ಇದುವೇ ಸರಿಕಾಲ |
ಮುಂದಿನ ಬದುಕನು ಸಾರ್ಥಕಗೊಳಿಸುತ
ಬಾಳುವ ಬನ್ನಿರಿ ನೂರ್ಕಾಲ ! ||೪||

-ಸುರೇಖಾ ಭಟ್, ಭೀಮಗುಳಿ
15.02.2015

Sunday, February 8, 2015

"ರಂಗ-ರಂಗ-ರಂಗ"

ರಂಗನ ಕೊಳಲಿನ ಗಾನವ ಕೇಳುವ 
ತುಡಿತವು ಹೆಚ್ಚಿತು ಒಂದು ದಿನ ||
ಯಮುನಾ ತೀರವ ಮನದಲ್ಲಿರಿಸಿ 
ಧ್ಯಾನಸ್ಥಳಾದೆನಾ ಸುದಿನ ||೧||

ವೃಂದಾವನದಾ ಸುಂದರ ಚಿತ್ರಣ 
ಕಣ್ಣಿಗೆ ಕಟ್ಟಿತು ಎದುರಲ್ಲಿ ||
ಗೋವ್ಗಳ ಜೊತೆಯಲಿ ರಂಗನು ಬಂದನು
ಗೋಪಬಾಲರ ಜೊತೆಯಲ್ಲಿ ||೨||

ಕೊಳಲನು ಪಿಡಿದಾ ರಂಗನು ನಿಂದನು
ಮರದಾ ಕೆಳಗಿನ ನೆರಳಿನಲಿ ||
ಗೋವ್ಗಳು-ಗೆಳೆಯರು-ಪಶು ಪಕ್ಷಿಗಳು
ಸರ್ವರು ನೆರೆದರು ಆಸ್ಥೆಯಲಿ ||೩||

ಕೊಳಲಿನ ನಾದವು ಹೊರಹೊಮ್ಮುತಲಿರೆ
ಸಂಗೀತದ ರಸ ಧಾರೆಯಲಿ ||
ನಿಂದಳು ಯಮುನೆಯು ಬೆರೆತಳು ಗಾನದಿ
ರಂಗನ ಸೇರುವ ಭಾವದಲಿ ||೪||

ಭವವು ಮರೆಯಿತು ಭಾವವು ಮೆರೆಯಿತು
ನಾನಾರೆಂಬುದು ಮರೆತಿಹುದು ||
ಮೈಮನ ತುಂಬಿತು ಕೊಳಲಿನ ಇಂಪದು
ಗಾಯನ ನನ್ನಲಿ ಬೆರೆತಿಹುದು ||೫||

ಬೆಣ್ಣೆಯ ರೂಪದ ಮನವನು ಕದಿಯಲು
ರಂಗನು ಭೂಮಿಗೆ ಬಂದಿಹನು ||
ಚಿಂತೆಯ ಮಾಡದೆ ಅರ್ಪಿಸೋಣವೇ 
ನಮ್ಮದು ಎನ್ನುವ ಸರ್ವವನು ||೬||

ಅರ್ಪಿಸ ಹೊರಟಿಹ ನಮ್ಮದೆಲ್ಲವೂ 
ಅವನ ಕರುಣೆಯ ಕೃಪೆತಾನೆ ? ||
ನಾನು ನನ್ನದು ಎನ್ನುವುದೆಲ್ಲವೂ
ನಮ್ಮದೇನಲ್ಲ ನಿಜತಾನೆ ? ||೭||

ಮೋಹದ ಜೊತೆಯಲಿ ಮೋಹನನಿರನು
ಎನ್ನುವ ವಿಷಯವ ತಿಳಿಯೋಣ ||
ಭವಸಾಗರವನು ದಾಟಿಸು ಎನ್ನುತ
ರಂಗನ ಜೊತೆಯಲಿ ಬೆರೆಯೋಣ ||೮||

-ಸುರೇಖಾ ಭಟ್, ಭೀಮಗುಳಿ
08/02/2015