Thursday, March 14, 2019

“ಕೇವಲ ನಿನಗಾಗಿ..." #ಪ್ರೇಮರಾಗ -2


ಅಪ್ಪ-ಅಮ್ಮನ ಹಾಗೆ ಕಾಳಜಿಯ ವಹಿಸಿರುವೆ
ಒಪ್ಪಕ್ಕಳೆನ್ನುತ್ತ  ರಮಿಸಿ ಬರುವೆ ||
ತಪ್ಪುಗಳು ಬಲು ಸಹಜ ಒಪ್ಪಿಕೊಳ್ಳುತ ನಡೆವ
ಮುಪ್ಪುಣುವ ಕಾಲಕ್ಕು ಜೊತೆಯಲಿರುವೆ || ೧ ||

ಪ್ರೀತಿ ತೋರುತಲಿರುವೆ ಹೆತ್ತ ತಾಯಿಯ ರೀತಿ
ನೀತಿ ನಡೆ-ನುಡಿಯೆಲ್ಲ ತಂದೆಯಂತೆ ||
ಭೀತಿ ತೊಲಗಿಸುತಿರುವೆ ಸೋದರನ ರೀತಿಯಲಿ
ಮಾತೆಲ್ಲ ನನ್ನ ಮನವೊಪ್ಪುವಂತೆ || ೨ ||

ಭಾರಿ ಹೇಳಿದರೆನಗೆ ಬಂಧು-ಬಾಂಧವರೆಲ್ಲ
ನೂರು ಚಿಂತಿಸಬೇಡ - ಇವನು ಯೋಗ್ಯ ||
ಬೇರೇನು ಬೇಕಿಲ್ಲ- ನಿನ್ನೊಳಗೆ ಹುಳುಕಿಲ್ಲ
ಸಾರಿ ಹೇಳುವೆನೀಗ ನೀನೆನ್ನ ಭಾಗ್ಯ || ೩ ||

ಕಲ್ಲು ಸಕ್ಕರೆಯಂತೆ ಹೊರಗಿಂದ ನೀ ಕಠಿಣ
ಬೆಲ್ಲದಂತಹ ಮನಸು ಬಲ್ಲೆನಲ್ಲ ||
ಮೆಲ್ಲ ಮಾತಲಿ ಗೆಲುವ ಕಲೆಯೆನಗೆ ಕರಗತವು
ಒಲ್ಲೆನೆನ್ನುಲು ನಿನಗೆ ಅವಕಾಶವಿಲ್ಲ || ೪ || 😜

- ಸುರೇಖಾ ಭೀಮಗುಳಿ
14/03/2019
ಚಿತ್ರ : ಅಂತರ್ಜಾಲ

Tuesday, March 12, 2019

“ಕೇವಲ ನಿನಗಾಗಿ.... #ಪ್ರೇಮರಾಗ -1 ''


ಬಾಳಿನೆಡೆ ಭರವಸೆಯ ನನಗಾಗಿ ತಂದವನೆ
ನಾಳೆಯೆಡೆ ಹಾಕೋಣ ಕೂಡಿ ಹೆಜ್ಜೆ ||
ತಾಳಿಕೊಳ್ಳುವೆ ನಾನು ತವರೂರ ಸೆಳೆತವನು
ಬಾಳುವೆನು ನಿನ್ನೊಡನೆ ಕುಣಿಸಿ ಗೆಜ್ಜೆ || ೧ ||

ತೇಲು ದನಿಯಲಿ ನೀನು ನನ್ನನ್ನು ಕರೆದಾಗ 
ಹಾಲು ಜೇನಿನ ಜೊತೆಗೆ ಬೆರೆಸಿದಂತೆ ||
ಸಾಲು ಕಷ್ಟವೆ ಬರಲಿ ಸಾಗೋಣ ಜೊತೆಜೊತೆಗೆ
ನೀಲಿ ಬಾನಿನ ಜೋಡಿ ಪಕ್ಷಿಯಂತೆ || ೨ ||

ನಂಬಿಕೆಯೆ ಅಡಿಪಾಯ ನಮ್ಮ ಈ ಬಂಧನಕೆ
ಚುಂಬನದ ಸಿಹಿಯಿಹುದು ಸಾಕ್ಷಿಗಾಗಿ ||
ಹಂಬಲವ ಹೆಚ್ಚಿಸುವ ಮಾತು ನಿಲ್ಲಿಸು ಸಾಕು 
ತುಂಬಿ ಬಂದಿದೆ ಹೃದಯ ಪ್ರೀತಿಗಾಗಿ || ೩ ||

ನನಗಿಲ್ಲದಿಹ ಮೀಸೆ ನಿನಗೆ ಪ್ರಕೃತಿ ಕೊಡುಗೆ
ಮನದೊಳಗೆ ಅದರೆಡೆಗೆ ಸೆಳೆತವಿತ್ತು ||
ಕನಸೆಲ್ಲ ನನಸಾದ ಮೇಲೇಕೆ ಕಾಯಿಸುವೆ ?
ನನಗದನು ಚುಚ್ಚಿಸದೆ ನೀಡು ಮುತ್ತು || ೪ || 😜

- ಸುರೇಖಾ ಭೀಮಗುಳಿ
12/03/2019
ಚಿತ್ರ : ಅಂತರ್ಜಾಲ