ಬೇವು ಹೂವ ನಡುವಿನಲ್ಲಿ ಬೆಲ್ಲದಂಥ ಚುಂಬನ ||
ನೋವು ಮರೆತು ಹೋಯಿತೀಗ ಗಟ್ಟಿಯಾಯ್ತು ಬಂಧನ || ೧ ||
ಹೊಸ ವರುಷದ ಹೊಸ್ತಿಲಲ್ಲಿ ನೀನು ಕೊಟ್ಟ ಮುತ್ತಲಿ ||
ಬೆಸಗೊಂಡಿತು ನನ್ನ ಹೃದಯ ಕಳೆದು ಹೋದೆ ಮತ್ತಲಿ || ೨ ||
ಮುದದಿ ಮುತ್ತನೊತ್ತಿಬಿಟ್ಟೆ- ಮಿಂಚು ಹೊಡೆತ ಮೈಯಿಗೆ ||
ಕದವ ತಟ್ಟಿ ಹೃದಯದೊಳಗೆ ಹೆಜ್ಜೆಯಿಟ್ಟೆ ಮೆಲ್ಲಗೆ || ೩ ||
ಬರಿಯ ಸಲುಗೆಯಿಂದ ನನ್ನ ಕರೆಯಬೇಡ ಸರಸಕೆ ||
ಸುರಿಸ ಬೇಡ ಪ್ರೇಮವರ್ಷ ಕೊಚ್ಚಿ ಪೋಪೆ ರಭಸಕೆ || ೪ ||
ಚೈತ್ರ ಮಾಸ ಮೊದಲಿನಲ್ಲಿ ನೀನು ಕೊಟ್ಟೆ ಉಡುಗೊರೆ ||
ಮೈತ್ರಿ ಗೆರೆಯ ದಾಟುತಿರುವ ಅರಿವುಯಿಹುದೆ ಓ ದೊರೆ ? || ೫ ||
ದಟ್ಟ ಕಾಡ ಕಡೆಗೆ ಹಾರಿ ಪುಟ್ಟ ಗೂಡ ಕಟ್ಟುವ ||
ಬಿಟ್ಟುಯೆಲ್ಲ ಚಿಂತೆಯನ್ನು ಜಗವ ಮರೆತು ಬದುಕುವ || ೬ ||
- ಸುರೇಖಾ ಭೀಮಗುಳಿ
19/03/2018
ಚಿತ್ರ : shivashankar banagar